ದಶರಥ 1

ಅಯೋಧ್ಯೆಯ ಅರಸು. ಇವನ ವೃತ್ತಾಂತ ರಾಮಾಯಣದ ಬಾಲಕಾಂಡ ಮತ್ತು ಅಯೋಧ್ಯಾಕಾಂಡಗಳಲ್ಲಿ ಬರುತ್ತದೆ. ಈತ ಸೂರ್ಯವಂಶದ ಇಕ್ಷ್ವಾಕು ಸಂತತಿಯವ. ಅಜಮಹಾರಾಜನ ಮಗ. ಶ್ರೀರಾಮಚಂದ್ರನ ತಂದೆ. ಕೋಸಲದೇಶದ ಭಾನುಮಂತ ರಾಜನ ಮಗಳಾದ ಕೌಸಲ್ಯೆ, ಮಗಧ ದೇಶದ ಶೂರಸೇನ ರಾಜನ ಮಗಳಾದ ಸುಮಿತ್ರೆ, ಕೇಕಯ ದೇಶದ ಅಶ್ವಪತಿ ರಾಜನ ಮಗಳಾದ ಕೈಕಯಿ-ಇವರು ಈತನ ಹೆಂಡತಿಯರು. ಶಾಂತೆ ಈತನ ಮಗಳು. ಈಕೆಯನ್ನು ರೋಮಪಾದ ರಾಜನಿಗೆ ಸಾಕಲು ಕೊಡಲಾಗಿತ್ತು. ಈತನ ಆಸ್ಥಾನದಲ್ಲಿದ್ದ ದೃಷ್ಟಿ, ಜಯಂತ. ವಿಜಯ, ಸುರಾಷ್ಟ್ರ, ರಾಷ್ಟ್ರವರ್ಧನ, ಅಶೋಕ, ಮಂತ್ರಪಾಲ, ಸುಮಂತ್ರ ಎಂಬ ಎಂಟು ಮಂದಿ ಪ್ರಧಾನರಲ್ಲಿ ಸುಮಂತ್ರ ಮುಖ್ಯನಾಗಿದ್ದ. ವಸಿಷ್ಠ, ವಾಮದೇವ, ಜಾಬಾಲಿ, ಕಶ್ಯಪ, ಗೌತಮ, ಮಾರ್ಕಂಡೇಯ, ಕಾತ್ಯಾಯನ ಎಂಬ ಏಳು ಮಂದಿ ರಾಜಪುರೋಹಿತರಲ್ಲಿ ವಸಿಷ್ಠ ಮುಖ್ಯನಾಗಿದ್ದ. ಬಹಳ ಕಾಲದ ವರೆಗೆ ಈತನಿಗೆ ಪುತ್ರಸಂತಾನವಿರಲಿಲ್ಲವಾಗಿ ವಸಿಷ್ಠನ ಆಣತಿಯಂತೆ ಶಾಂತೆಯ ಪತಿಯಾದ ಋಷ್ಯಶೃಂಗ ದಶರಥನಿಂದ ಪುತ್ರಕಾಮೇಷ್ಟಿ ಯಾಗ ಮಾಡಿಸಿದ. ತತ್ಫಲವಾಗಿ ಕೌಸಲ್ಯೆ ರಾಮಚಂದ್ರನನ್ನು ಸುಮಿತ್ರೆ ಲಕ್ಷ್ಮಣ, ಶತ್ರುಘ್ನರನ್ನು ಕೈಕಯಿ ಭರತನನ್ನು ಪಡೆದರು. ಯಜ್ಞಸಂರಕ್ಷಣೆಗಾಗಿ ವಿಶ್ವಾಮಿತ್ರರೊಡನೆ ಹೋದ ರಾಮಚಂದ್ರ ಶಿವಧನಸ್ಸನ್ನು ಮುರಿದು ಜನಕಜೆ ಸೀತೆಯನ್ನು ಮದುವೆಯಾದ. ಲಕ್ಷ್ಮಣ ಜನಕನ ಮಗಳಾದ ಊರ್ಮಿಳೆಯನ್ನು ವರಿಸಿದ. ಒಮ್ಮೆ ತರುಣ ದಶರಥ ಬೇಟೆಯಾಡುವಾಗ ದೂರದ ಕೊಳದಲ್ಲಿ ನೀರು ತುಂಬುತ್ತಿದ್ದ ತಾಂಡವಮುನಿ ಎಂಬಾತನನ್ನು ಮೃಗವೆಂದು ಭಾವಿಸಿ ಕೊಂದ. ಇದರಿಂದ ದುಃಖಿತರಾದ ಆ ಮುನಿಯ ತಂದೆತಾಯಿಗಳು ದಶರಥನಿಗೂ ಮುಪ್ಪಿನಲ್ಲಿ ತಮ್ಮಂತೆಯೇ ಪುತ್ರಶೋಕ ಪ್ರಾಪ್ತವಾಗಲೆಂದು ಶಾಪವಿತ್ತರು. ಮುಂದೆ ರಾಮಚಂದ್ರನಿಗೆ ಯುವರಾಜಪಟ್ಟ ಕಟ್ಟಲು ಪ್ರಯತ್ನ ನಡೆದಾಗ ಕೈಕಯಿ ತನ್ನ ದಾಸಿ ಮಂಥರೆಯ ಸೂಚನೆಯಂತೆ ಶ್ರೀರಾಮನ ಅರಣ್ಯವಾಸಕ್ಕೆ ಕಾರಣಳಾದಳು. ರಾಮಸೀತೆಯರೊಡನೆ ಲಕ್ಷ್ಮಣ ಅರಣ್ಯಕ್ಕೆ ತೆರಳಿದ. ಭರತ ಶತ್ರುಘ್ನರು ಸೋದರಮಾವನ ಊರಿಗೆ ಹೋಗಿದ್ದರು. ಹೀಗೆ ಮಕ್ಕಳೆಲ್ಲ ದೂರದಲ್ಲಿದ್ದಾಗ ದಶರಥ ಸ್ವರ್ಗಸ್ಥನಾದ.

ರಾವಣನ ವಧೆಯ ಅನಂತರ ಸೀತಾದೇವಿಯನ್ನು ಸ್ವಿಕರಿಸಲು ಶ್ರೀರಾಮ ಒಪ್ಪದಿದ್ದಾಗ ಸೀತಾದೇವಿ ಅಗ್ನಿಪ್ರವೇಶಮಾಡಿ ತನ್ನ ಪಾವಿತ್ರ್ಯವನ್ನು ಸ್ಥಾಪಿಸಿದಳು. ಆಗ ದಶರಥ ದರ್ಶನ ನೀಡಿ ಆಕೆಯ ಪಾವನತ್ವವನ್ನು ಕೊಂಡಾಡಿದ. ಭಗವಂತನನ್ನು ಪುತ್ರನನ್ನಾಗಿ ಪಡೆಯಲು ಕಶ್ಯಪ ಅದಿತಿಯರೇ (ನೋಡಿ- ಅದಿತಿ) ದಶರಥ ಕೌಸಲ್ಯೆಯರಾಗಿ ಹುಟ್ಟಿದರೆಂದೂ ಹೇಳಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ